ಇಷ್ಟಲಿಂಗ -
	ವೀರಶೈವರು ಶಿವಾಗಮೋಕ್ತವಾಗಿ ಕಂಠ, ಹೃದಯ, ಬಾಹು ಮತ್ತು ತಲೆಗಳಲ್ಲಿ ಧರಿಸುವ ಲಿಂಗ. ಇದನ್ನು ಅನುಸರಿಸಿ ಭಾವಲಿಂಗ, ಪ್ರಾಣ ಲಿಂಗಗಳ ಪೂಜೆಯಾಗಬೇಕೆಂದು ವೀರಶ್ವೈವ ಸಿದ್ಧಾಂತ ಹೇಳುತ್ತದೆ.		
(ಬಿ.ಎಸ್.)

	ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಾದಿಗಳಿಗೆ ಕಾರಣವಾದುದೇ ಬ್ರಹ್ಮ ಎಂದು ಭಾರತೀಯ ತತ್ತ್ವಶಾಸ್ತ್ರ ಹೇಳುತ್ತದೆ. ಆ ಪರಬ್ರಹ್ಮವನ್ನೇ ಇಲ್ಲಿ ಸ್ಥಲ, ಲಿಂಗ ಎಂದು ಹೆಸರಿಸಲಾಗಿದೆ. ಸ್ಥಾವರಜಂಗಮಾತ್ಮಕವಾದ ಸಮಸ್ತ ವಿಶ್ವಕ್ಕೂ ಆಶ್ರಯವಾದುದೇ ಸ್ಥಲತತ್ತ್ವ. ಈ ವಿಶ್ವ ಯಾವ ಮೂಲವಸ್ತುವಿನಿಂದ ಹುಟ್ಟಿ ಮತ್ತೆ ಎಲ್ಲಿ ಅಡಗುವುದೋ ಅದು ಲಿಂಗ. ಮೇಲೆ ಹೇಳಿದ ಸ್ಥಲ ಅಥವಾ ಲಿಂಗತತ್ತ್ವಗಳಿಂದ ಈ ಬ್ರಹ್ಮಾಂಡ ಮತ್ತು ಪಿಂಡಾಂಡಗಳು (ಶರೀರ) ನಿರ್ಮಿತವಾಗಿವೆ. ಮೇಲಾಗಿ ಇವೆರಡಕ್ಕೂ ತಾತ್ತ್ವಿಕ ಸಂಬಂಧವಿದೆ.

	e್ಞÁನ ಮತ್ತು ಕ್ರಿಯೆಗಳಿಗೆ ಸಂಬಂಧಿಸಿದ ಎಲ್ಲ ಶರೀರವ್ಯಾಪಾರಗಳಿಗೆ ಹೃದಯ ಆಶ್ರಯ. ಅಲ್ಲಿರುವ ಆಕಾಶ (ಅವಕಾಶ) ಚೇತನ ಅದನ್ನು ದಹರಾಕಾಶ, ಪರವೇಶ್ಮ ಎಂದು ಉಪನಿಷತ್ತುಗಳು ಹೇಳುತ್ತವೆ. ಗೀತೆ ಎಲ್ಲ ಪ್ರಾಣಿಗಳ ಹೃದಯದಲ್ಲೂ ಈಶ್ವರನಿದ್ದಾನೆ ಎನ್ನುತ್ತದೆ. ಇದೇ ವೀರಶೈವ ಪರಿಭಾಷೆಯಲ್ಲಿ ಪ್ರಾಣಲಿಂಗವೆನಿಸಿದೆ.

	ಹೃದಯಕೋಶದಲ್ಲಿನ ಆಕಾಶದ ಆಕಾರವನ್ನು ಗಮನಿಸಿಯೇ ಇಷ್ಟಲಿಂಗದ ರೂಪರಚನೆಯಾಗಿದೆ. "ಹೃದಯಾಬ್ಜಕೋಶಾಂತರಾವಕಾಶಲಬ್ದಂಗುಷ್ಠ ಪರಿಮಾಣಸ್ಯ ಲಿಂಗಾಕಾರತ್ವ ಮಸ್ತೀತಿ ತಸ್ಯ ಲಿಂಗರೂಪತ್ವ ಸಿದ್ದಿಃ" ಎಂದು ಅಪ್ಪಯ್ಯ ದೀಕ್ಷಿತರು ತಮ್ಮ ಪಂಚರತ್ನ ಸ್ತುತಿಯಲ್ಲಿ ಹೇಳಿದ್ದಾರೆ. ಅಂದರೆ ಮಾನವನ ಹೃದಯಕೋಶ ಅಂಗುಷ್ಠದಷ್ಟು (ಹೆಬ್ಬೆರಳು) ಇರುವುದರಿಂದ ಅಲ್ಲಿರುವ ಆಕಾಶದ ಪರಿಮಾಣವನ್ನು ಅನುಸರಿಸಿ ಲಿಂಗರೂಪ ಸಿದ್ಧಿಸುತ್ತದೆ. ಅಂಗುಷ್ಠಪರಿಮಾಣವುಳ್ಳ ಓಂಕಾರರೂಪಿಯಾದ ಲಿಂಗರೂಪ ಶಿವನನ್ನು ಹೃದಯದಲ್ಲಿ ಧ್ಯಾನಿಸಬೇಕು. ಹೆಬ್ಬೆರಳಿನ ಪ್ರಮಾಣದಷ್ಟಿರುವ ಅಂತರಾತ್ಮ ಜನರ ಹೃದಯದಲ್ಲಿದ್ದಾನೆ. ಅವನನ್ನು ಧ್ಯಾನಿಸುವವರು ಅಮೃತರಾಗುತ್ತಾರೆ ಎಂದು ಉಪನಿಷತ್ತುಗಳಲ್ಲಿ ಉಕ್ತವಾದ ಅಂಶವನ್ನು ವೀರಶೈವ ಆಚಾರ್ಯರು ಉಲ್ಲೇಖಿಸಿದ್ದಾರೆ. ಆ ಪ್ರಾಣಲಿಂಗದ ಪ್ರತೀಕವಾಗಿ ಬಾಹ್ಯ ಇಷ್ಟಲಿಂಗವನ್ನು ಶರೀರದ ಮೇಲೆ ಧರಿಸುತ್ತಾರೆ.

	ಪೀಠ, ಗೋಮುಖ, ಬಾಣ ಮೊದಲಾದ ಅವಯವಗಳಿಂದ ಕೂಡಿದ್ದು ಇಷ್ಟಲಿಂಗ ಪಂಚಸೂತ್ರ ಪ್ರಮಾಣದಂತೆ ರಚಿತವಾಗುತ್ತದೆ. ಅದನ್ನು ಸ್ಫಟಿಕ, ಶೈಲಜ (ಶ್ರೀಶೈಲಶಿಲೆ), ಬಾಣ, ಚಂದ್ರಕಾಂತ ಅಥವಾ ಸೂರ್ಯಕಾಂತ ಮಣಿಗಳಿಂದ ರಚಿಸಬೇಕು. ಅದರ ಮೇಲೆ ಕಾಂತಿ (ಚಿದ್ ರಸ) ಎಂಬ ರಾಸಾಯನಿಕ ವಸ್ತುವನ್ನು ಧರಿಸಬೇಕು. ಈ ಕಾಂತಿ ಗೇರೆಣ್ಣೆ, ಎಳ್ಳೆಣ್ಣೆ, ಕರ್ಪೂರದ ಕಾಡಿಗೆ ಮುಂತಾದವುಗಳಿಂದ ಸಿದ್ಧವಾಗುತ್ತದೆ. ಕಾಂತಿಧರಿಸಿದ ಈ ಲಿಂಗ ದುಂಡಾಗಿಯೂ ನುಣುಪಾಗಿಯೂ ಇದ್ದು ಹೊಳೆಯುವ ಕಪ್ಪು ನೇರಳೆಹಣ್ಣಿನ ಆಕಾರ (ಅಂಗುಷ್ಠಪರಿಮಾಣ) ತಳೆಯುತ್ತದೆ. ಇದರಲ್ಲಿ ಗುರುವಾದದ ಹೃದಯದಲ್ಲಿರುವ ಪ್ರಾಣಲಿಂಗಕಲೆಯನ್ನು ವಿಧ್ಯುಕ್ತವಾಗಿ ತನ್ನ ಯೋಗಶಕ್ತಿಯಿಂದ ಆಕರ್ಷಿಸಿ ಸ್ಥಾಪಿಸುತ್ತಾನೆ. ಲಿಂಗಪೂಜಾವಿಧಾನ, ಮಂತ್ರರಹಸ್ಯಗಳನ್ನು ಬೋಧಿಸಿದ ತರುವಾಯ ಹೀಗೆ ಬೆಸಸುತ್ತಾನೆ; ಅನಿಷ್ಟವನ್ನು ಕಳೆದು ಇಷ್ಟಾರ್ಥವನ್ನು ನೀಡುವ ಪರವಸ್ತುವೇ ಇಷ್ಟಲಿಂಗ. ಇದನ್ನು ಯಾವಾಗಲೂ ಶರೀರದ ಮೇಲೆ ಧರಿಸಿ ಏಕಾಗ್ರತೆಯಿಂದ ಪೂಜಿಸು, ಅಮೃತಸ್ಯ ದೇವಧಾರಣೋಭೂಯಾಸಂ, ತಸ್ಯಾಭಿಧ್ಯಾನದ್ಯೊಜನಾತತ್ತ್ವ ಭಾವಾದ್ಬೂಯಶ್ಚಾಂತೇ ವಿಶ್ವಮಾಯಾ ನಿವೃತ್ತಿಃ-ಮುಂತಾದ ಶ್ರುತಿಗಳು ಇಷ್ಟಲಿಂಗವನ್ನು ಶರೀರದ ಮೇಲೆ ಧರಿಸಬೇಕೆಂದು ವಿಧಿಸುತ್ತವೆ. ವಾಮಹಸ್ತದಲ್ಲಿಟ್ಟು ಇಷ್ಟಲಿಂಗವನ್ನು ಪೂಜಿಸಿ 12 ಅಂಗುಲ ದೂರದಿಂದ ನಿರೀಕ್ಷಿಸುತ್ತ ಮಂತ್ರ ಜಪಮಾಡುವುದರಿಂದ ಯೋಗಶಾಸ್ತ್ರೋಕ್ತವಾದ ದೃಷ್ಟಿಯೋಗ (ರಾಜಯೋಗ) ಸಿದ್ಧಿಸುತ್ತದೆ.

	ಓಂಕಾರವೇ ಲಿಂಗವಾದ್ದರಿಂದ ಇಷ್ಟಲಿಂಗ ತಾರಾದಿ ಪಂಚಸೂತ್ರಗಳಿಂದ ಘಟಿತವಾದ ಹೃದಯಾಕಾಶದ ಅವಯವಗಳ ಪ್ರಮಾಣವನ್ನು ಅನುಸರಿಸಿ ಪ್ರಣವ, ಪಂಚಾಕ್ಷರಗಳು, ತನ್ಮೂಲಕ ಪ್ರಾಣಲಿಂಗವೆನಿಸಿ, ಪುನಃ ಗುರುಮುಖದಿಂದ ಅದೇ ಬಾಹ್ಯದಲ್ಲಿ ಇಷ್ಟಲಿಂಗವೆನಿಸಿ ವಾಮಹಸ್ತದಲ್ಲಿ ಪೂಜೆಗೊಳ್ಳುತ್ತದೆ.

	ಮತ್ತೊಂದು ದೃಷ್ಟಿಯಿಂದ ಇಷ್ಟಲಿಂಗ ಶಿವಶಕ್ತಿಗಳ ಸಮಷ್ಟಿ. ಲಿಂಗದ ಪಾಣಿವಾಟವೇ ಶಕ್ತಿ; ಮೇಲಿನ ಬಾಣವೇ ಶಿವ. ಮೇಲಾಗಿ ಲಿಂಗ ತ್ರಿಮೂರ್ತಿ ಸ್ವರೂಪ; ಲಿಂಗದ ಕೆಳಭಾಗ ಬ್ರಹ್ಮ, ಗೋಮುಖಭಾಗ ವಿಷ್ಣು, ಮೇಲಿನ ಬಾಣ ಶಿವ. ಹೀಗೆ ಇಷ್ಟಲಿಂಗ ಅನೇಕ ದೃಷ್ಟಿಯಿಂದ ಭಗವತ್ ಸ್ವರೂಪ ತಳೆದಿದೆ.

	ಮಾನವನ ಹೃದಯಾದಿಗಳಲ್ಲಿ ಜ್ಯೋತಿರ್ಲಿಂಗರೂಪದಿಂದ ಶಿವನಿರುವನಾದರೂ ಅವನನ್ನು ಅನುಸಂಧಾನ ಮಾಡುವುದು ಕೇವಲ ಯೋಗಿಗಳಿಗೆ ಮಾತ್ರ ಸಾಧ್ಯ. ಅದಕ್ಕಾಗಿ ಬಾಹ್ಯದಲ್ಲಿ ಆ ಪ್ರಾಣಲಿಂಗದ ಕುರುಹನ್ನು (ಇಷ್ಟಲಿಂಗ) ಸಾಮಾನ್ಯರು ಧರಿಸಬೇಕೆಂಬುದು ಒಂದು ದೃಷ್ಟಿ. ಹಾಗೆ ಹೃದಯಾದಿಗಳಲ್ಲಿ ಅನುಸಂಧಾನ ಮಾಡುವ ಶಕ್ತಿಯಿರಲಿ ಇಲ್ಲದಿರಲಿ ಬಾಹ್ಯದಲ್ಲಿ ಅದರ ಪ್ರತೀಕವಾದ ಇಷ್ಟಲಿಂಗವನ್ನು ಧರಿಸಲೇಬೇಕು ಎಂಬುದು ಇನ್ನೊಂದು ದೃಷ್ಟಿ. ಮಾನವನಿಗೆ ಕರ್ಮವಶದಿಂದ ಬಂದಿರುವ ಭವರೋಗ ವಾಸಿಯಾಗಬೇಕಾದರೆ ಅವನ ಶರೀರದಲ್ಲಿಯೇ ಇರುವ ಪ್ರಾಣಲಿಂಗಕಲೆಯನ್ನು ಹೊರತೆಗೆದು ಇಷ್ಟಲಿಂಗರೂಪದಿಂದ ಪೂಜಾಯೋಗ್ಯವಾಗಿ ಮಾಡಬೇಕು ಎಂದು ಮಗ್ಗೆ ಮಾಯಿದೇವಕೃತ ಶತಕತ್ರಯದಲ್ಲಿ ಉಕ್ತವಾಗಿದೆ.

	ಗುರು ದೀಕ್ಷಾಕಾಲದಲ್ಲಿ ಭಕ್ತನ ಸ್ಥೂಲ, ಸೂಕ್ಮ ಮತ್ತು ಕಾರಣ ಶರೀರಗಳಲ್ಲಿ ಕ್ರಮವಾಗಿ ಇಷ್ಟ. ಪ್ರಾಣ ಮತ್ತು ಭಾವಲಿಂಗಗಳನ್ನು ಸ್ಥಾಪಿಸುತ್ತಾನೆ. ಅದೇ ಸಮಯದಲ್ಲಿ ಅವರ e್ಞÁನೇಂದ್ರಿಯ, ಕರ್ಮೇಂದ್ರಿಯ ಮತ್ತು ಮನಸ್ಸುಗಳಲ್ಲಿ ಕ್ರಮವಾಗಿ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಚರಲಿಂಗ, ಪ್ರಸಾದಲಿಂಗ ಮತ್ತು ಮಹಾಲಿಂಗಗಳನ್ನು ಸ್ಥಾಪಿಸುತ್ತಾನೆ. ಇದರಿಂದ ಸಾಧಕ ಇಂದ್ರಿಯಮುಖದಿಂದ ಸ್ವೀಕರಿಸುವ ಪ್ರತಿಯೊಂದು ವಿಷಯವೂ ಲಿಂಗಮುಖವಾಗಿ ಬರುವುದರಿಂದ ಪ್ರಸಾದವೆನಿಸುತ್ತದೆ. ಆಗ ಆತ ಲಿಂಗಭೋಗೋಪಭೋಗಿ ಎನಿಸಿ ಜೀವನಮುಕ್ತನಾಗಿ ಕಡೆಗೆ ಮುಕ್ತನಾಗುತ್ತಾನೆ.

	ಇಷ್ಟಲಿಂಗಧಾರಣ ಚಾರಿತ್ರಿಕ ದೃಷ್ಟಿಯಿಂದ ಸುಮಾರು ಕ್ರಿಸ್ತಶಕೆಯ ಆರಂಭ ಕಾಲದಿಂದಲೂ ಭಾರತದಲ್ಲಿರುವಂತೆ ತಿಳಿದುಬಂದಿದೆ. ಭಾರತದ ಸಾರ್ವಭೌಮರೆನಿಸಿದ್ದ ಭಾರಶಿವ (2ನೆಯ ಶತಮಾನ), ಪಲ್ಲವ (5-7ನೆಯ ಶತಮಾನ) ರಾಜರು ಲಿಂಗಧಾರಿಗಳಾಗಿದ್ದರು.
(ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ